ಟೆಸ್ಲ, ನಿಕೋಲ
1856-1943.  ಯೂಗೋಸ್ಲಾವಿಯ ಸಂಜಾತ ಅಮೆರಿಕನ್ ವೈದ್ಯುತ ಎಂಜಿನಿಯರ್ ಹಾಗೂ ಭೌತವಿಜ್ಞಾನಿ. ಇಂದಿನ ಯೂಗೋಸ್ಲಾವಿಯದ (ಅಂದಿನ ಆಸ್ಟ್ರಿಯ-ಹಂಗರಿ) ಕ್ರೋಶಿಯದಲ್ಲಿನ ಸ್ಮಿಲ್ಜಾನ್‍ನಲ್ಲಿ ಜನನ (9-7-1856), ಗ್ರಾಜ್óನ ಪಾಲಿಟೆಕ್ನಿಕಿನಲ್ಲಿ ಮತ್ತು ಪ್ರೇಗ್ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಭೌತಶಾಸ್ತ್ರಗಳ ಅಧ್ಯಯನ ನಾಲ್ಕು ವರ್ಷಗಳ ಅನಂತರ ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೆ ವಲಸೆ, ಅಲ್ಲಿ ಕೆಲವು ಕಾಲ ವಿಖ್ಯಾತ ಉಪಜ್ಞಾಕಾರ (ಇನ್ವೆಂಟರ್) ತಾಮಸ್ ಅಲ್ವ ಎಡಿಸನ್‍ನ ಬಳಿ ಉಪಜ್ಞಾಕಾರನಾಗಿ ಕೆಲಸ, ಬಳಿಕ ನ್ಯೂಯಾರ್ಕಿನಲ್ಲಿ ಸ್ವಂತ ಉಪಜ್ಞೆ ವೃತ್ತಿ, ಟೆಸ್ಲ ಉಪಜ್ಞಾಲಯದ ಸ್ಥಾಪನೆ, ಅನೇಕ ಉಲ್ಲೇಖನಾರ್ಹ ಉಪಜ್ಞೆಗಳು-ಹೀಗೆ ಟೆಸ್ಲನ ಸಾಧನೆಯ ಮುಖ್ಯ ಹಂತಗಳನ್ನು ಗುರುತಿಸಬಹುದು. ಉಪಜ್ಞಕಾರ ಟೆಸ್ಲ ತನ್ನ ಸಾಧನೆಗಳಿಂದ ಅಪೂರ್ವ ವ್ಯಕ್ತಿಯಾಗಿ ಮೆರೆದರೆ ಮನುಷ್ಯನಾಗಿ ಟೆಸ್ಲ ಅನೇಕ ವೈಲಕ್ಷಣಗಳ ತವರಾಗಿ ಕಾಣುತ್ತಾನೆ. ಟೆಸ್ಲನ ಜೀವನದಲ್ಲಿ ಉಪಜ್ಞೆ ಮತ್ತು ಎಡಿಸನ್ನನೊಂದಿಗೆ ಸೆಣಸಾಟ ಬೇರ್ಪಡಿಸಲಾಗದಂತೆ ಹೆಣೆದುಕೊಂಡು ಬಂದವು ಎಂದು ಹೇಳಬಹುದು. ಸಂಶೋಧನೆಯೊಂದು ಪೂರ್ಣಗೊಂಡಾಗ ಎಡಿಸನ್ನನು ಒಪ್ಪಂದದಂತೆ ಕೊಡಬೇಕಾದ ಹಣವನ್ನು ಕೊಡುವಲ್ಲಿ ಹಿಂದೆಗೆದನೆಂದು ಟೆಸ್ಲನಿಗೆ ಉಂಟಾದ ಮನಸ್ತಾಪ ಅವನ ಜೀವನದ ಉದ್ದಕ್ಕೂ ನೆರಳಿನಂತೆ ಹಿಂಬಾಲಿಸಿತು. (ಬಲು ಬೇಗ ಸಿಟ್ಟಾಗಿ ಉದ್ರೇಕಗೊಳ್ಳುತ್ತಿದ್ದ ಟೆಸ್ಲನಿಗೆ, ಇತರರೊಂದಿಗೆ ಹೊಂದಿಸಿಕೊಂಡು ಹೋಗುವುದು ಸುಲಭವೇನೂ ಆಗಿರಲಿಲ್ಲ ಎಂಬುದನ್ನೂ ಮರೆಯಬಾರದು) ಮನುಷ್ಯರಲ್ಲಿ ತಾನು ಕಾಣಲಾಗದ ಮತ್ತು ಮರಳಿಸಲಾಗದ ಪ್ರೀತಿವಿಶ್ವಾಸಗಳನ್ನು ಹಕ್ಕಿಗಳಲ್ಲಿ ಕಂಡಂತೆ, ಟೆಸ್ಲ ತನ್ನ ಕಡೆಯ ದಿನಗಳಲ್ಲಿ ಪಾರಿವಾಳಗಳ ಸಾಕಣೆಯಲ್ಲಿ ತೊಡಗಿದ್ದ. ಉಪಜ್ಞಾಕಾರನಾಗಿ ಟೆಸ್ಲ ತನ್ನ ಪ್ರತಿಸ್ಪರ್ಧಿ ಎಡಿಸನ್ನನ ಮಟ್ಟಕ್ಕೆ ಏರದಿದ್ದರೂ (ಬಹುಶಃ ಇನ್ನಾವ ಸಂಶೋಧಕನೂ ಎಡಿಸನ್ನನ ಮಟ್ಟಕ್ಕೇರಲಿಲ್ಲ ಎಂದರೂ ತಪ್ಪಾಗುವುದಿಲ್ಲ) ಅವನ ಸಾಧನೆಯೇನೂ ಸಾಧಾರಣಮಟ್ಟದ್ದಲ್ಲ. ವೈದ್ಯುತ  ತಂತ್ರವಿಜ್ಞಾನವನ್ನು ಕ್ರಾಂತಿಕಾರಕವಾಗಿ ಬದಲಾಯಿಸಿದ ಪರ್ಯಾಯ ವಿದ್ಯುತ್ಪ್ರವಾಹ ಅಥವಾ ಎ.ಸಿ ಪ್ರವಾಹದ ಬಳಕೆಯನ್ನು ಪರಿಣಾಮಕಾರಿ ಬಳಕೆಗೆ ತಂದವನು ಈತನೇ. ವಿದ್ಯುತ್ತನ್ನು ತಂತಿಗಳ ಮೂಲಕ ಸಾಗಿಸುವಾಗ ಆಗುವ ಶಕ್ತಿನಷ್ಟದ ಸಮಸ್ಯೆ 19 ನೆಯ ಶತಮಾನದ ಅಂತ್ಯದಲ್ಲಿ ವೈದ್ಯುತ ಎಂಜಿನಿಯರಿಂಗನ್ನು ತೀವ್ರವಾಗಿ ಬಾಧಿಸುತ್ತಿತ್ತು. ಇದನ್ನು ಟೆಸ್ಲ ಬಗೆಹರಿಸಿದ. ಇದಕ್ಕಾಗಿ ವಿದ್ಯುತ್ ವಿಭವವನ್ನು ಹಲವಾರು ಪಟ್ಟು ವೃದ್ಧಿಸಿ ತಂತಿಗಳ ಮೇಲೆ ಸಾಗಿಸುವ ಉಪಾಯವನ್ನು ಟೆಸ್ಲ ಸೂಚಿಸಿದ ಮತ್ತು ವಿಭವವೃದ್ಧಿ ಮತ್ತು ಬೇಕಾದಾಗ ವಿಭವವನ್ನು ಕ್ಷೀಣಿಸಲು ಬೇಕಾಗುವ ಟ್ರಾನ್ಸ್ ಫಾರ್ಮರುಗಳನ್ನು ನಿರ್ಮಿಸಿದ. ಆನಂತರ ಪರ್ಯಾಯ ಪ್ರವಾಹದಲ್ಲಿ ಕೆಲಸ ಮಾಡುವ ಮೋಟಾರುಗಳನ್ನು ತಯಾರಿಸಿದ. ಆದರೆ ಈ ವೇಳೇಗಾಗಲೆ ನೇರ ಪ್ರವಾಹದಲ್ಲಿಯೇ (ಡಿ.ಸಿ.) ಎಲ್ಲವನ್ನೂ ಸಾಧಿಸಬಹುದು ಎಂಬ ನಂಬಿಕೆ ಬೆಳೆಸಿಕೊಂಡಿದ್ದ ಎಡಿಸನ್ನನಿಗೆ ಪ್ರಾಯಶಃ ಅವನ ಸುಧೀರ್ಘ ಸಫಲ ಸಂಶೋಧನ ಜೀವನ ಕಲಿಸಿದ ತಾನೇ ಸರಿ ಎಂಬ ಪಾಠದಿಂದಲೋ ಏನೋ, ತನ್ನ ಡಿ.ಸಿ ಪ್ರವಾಹದ ಮೇಲಿನ ಅವಲಂಬನೆ ಸರಿಯಲ್ಲ ಎಂಬ ಅರಿವಾದಾಗ, ಅದರಲ್ಲೂ ಈ ತಪ್ಪನ್ನು ಟೆಸ್ಲ ಎತ್ತಿ ತೋರಿಸಿದಾಗ, ಅದು ನುಂಗಲಾರದ ತುತ್ತಾಯಿತು. ಇದರಿಂದ ಕೆರಳಿದ ಎಡಿಸನ್ ಯಾವ ಅಳುಕೂ ಇಲ್ಲದೆ ಟೆಸ್ಲನ ಎ.ಸಿ.ಯ ವಿರುದ್ಧ ಒಂದು ಸಮರವನ್ನೇ ಆರಂಭಿಸಿದ. ಆಗ ತಾನೇ ನ್ಯೂಯಾರ್ಕ್ ರಾಜ್ಯದಲ್ಲಿ ಬಳಕೆಗೆ ತರಲು ಉದ್ದೇಶಿಸಿದ್ದ ವಿದ್ಯುತ್ ಕುರ್ಚಿ (ಮರಣದಂಡನೆಗೆ ಒಳಗಾದವರನ್ನು ಕೊಲ್ಲುವ ಒಂದು ಸಾಧನ) ಎ.ಸಿ.ಯನ್ನು ಬಳಸುವಂತೆ ಪ್ರಭಾವ ಬೀರಿ ಸರ್ಕಾರವನ್ನು ಒಪ್ಪಿಸಿದ್ದ ಎಡಿಸನ್ ಅನಂತರ ಅದೇ ಕುರ್ಚಿಯನ್ನು ಅಪಾಯಕಾರಿ ಎ.ಸಿ. ಟೆಸ್ಲನ ಹಂತಕಸ್ವಭಾವಕ್ಕೆ ಒಂದು ಉದಾಹರಣೆ ಎಂದು ಹೇಳಲು ತೊಡಗಿದ (ವಿದ್ಯುತ್ ಹನನದಲ್ಲಿ ಡಿ.ಸಿ. ಗಿಂತ ಎ.ಸಿ. ಹೆಚ್ಚು ಪರಿಣಾಮಕಾರಿಯಾಗುತ್ತದೆ.) ಇದಲ್ಲದೆ ಅನೇಕ ದೊಡ್ಡ ಉದ್ಯಮಿಗಳ ಸಹಾಯದಿಂದ ಪರ್ಯಾಯ ವಿದ್ಯುತ್ತಿನ ವಿರುದ್ಧ ಪ್ರಚಾರ ಮಾಡಿದೆ. ಆದರೆ ಕ್ರಮೇಣ, ಪರ್ಯಾಯ ವಿದ್ಯುತ್ತಿನ ಸೌಕರ್ಯಗಳು ಜನರಿಗೆ ಮನದಟ್ಟಾದಂತೆ, ಟೆಸ್ಲನ ಎ.ಸಿ.ಯು ಎಡಿಸನ್ನನ ಪ್ರಭಾವ ಮತ್ತು ಪ್ರತಿಷ್ಠೆಯನ್ನು ಗೆದ್ದಿತು. 1853ರಲ್ಲಿ ಜಿ. ವೆಸ್ಟಿಂಗ್‍ಹೌಸ್ ಎಂಜಿನಿಯರಿಂಗ್ ಕಂಪನಿ, ನಯಾಗರ ಜಲಪಾತದಿಂದ ವಿದ್ಯುತ್ ಜನಕ ಮತ್ತು ಇತರ ಸಲಕರಣೆಗಳನ್ನು ತಯಾರಿಸಲು ಒಪ್ಪಂದವನ್ನು ಪಡೆದಾಗ ಈ ಎ.ಸಿ. - ಡಿ.ಸಿ. ಸಮರ ಮುಕ್ತಾಯವಾಯಿತೆನ್ನಬಹುದು.

	ಆವರ್ತಿಸುವ ಕಾಂತಕ್ಷೇತ್ರ ತತ್ತ್ವವನ್ನು ಎ.ಸಿ. ತಂತ್ರವಿಜ್ಞಾನದಲ್ಲಿ ಅತ್ಯಂತ ಮಹತ್ತ್ವದ ಸಂಗತಿಯೆಂದು ಮನಗಂಡಿದ್ದ ಟೆಸ್ಲ ಈ ತತ್ತ್ವದ ಆಧಾರದ ಮೇಲೆ ಪ್ರೇರಣ (ಇಂಡಕ್ಷನ್), ಸಮಶ್ಚರಣ (ಸಿಂಕ್ರನಸ್) ಮತ್ತು ಸೀಳು ಪ್ರಾವಸ್ಥೆಯ (ಸ್ಪ್ಲಿಟ್ ಫೇಸ್) ಮೋಟರುಗಳನ್ನು ಸೃಜಿಸಿದ. ಇವಲ್ಲದೆ ಅನೇಕ ಹೊಸ ರೀತಿಯ ವಿದ್ಯುಜ್ಜನಕಗಳನ್ನೂ ಟ್ರಾನ್ಸ್‍ಫಾರ್ಮರುಗಳನ್ನೂ ನಿರ್ಮಿಸಿದ. ಈತ ನಿರ್ಮಿಸಿದ ಉನ್ನತ ಆವರ್ತಾಂಕವಿರುವ (ಹೈ ಫ್ರೀಕ್ವೇನ್ಸಿ) ಅನುರಣಕ ಟ್ರಾನ್ಸ್‍ಫಾರ್ಮರನ್ನು ಟೆಸ್ಲ ಸುರುಳಿ ಎಂದು ಕರೆಯುತ್ತಾರೆ.

	ನ್ಯೂ ಯಾರ್ಕಿನಲ್ಲಿ 1943 ರ ಜನವರಿ 7 ರಂದು ಟೆಸ್ಲ ಕಾಲವಾದ. ಟೆಸ್ಲನ ಜನ್ಮಶತಾಬ್ದಿಯನ್ನು ಪ್ರಪಂಚದಾದ್ಯಾಂತ ಸಮಸ್ತ ವಿಜ್ಞಾನ ಸಂಸ್ಥೆಗಳಲ್ಲಿಯೂ ಆಚರಿಸಲಾಯಿತು. ಈ ಸಂದರ್ಭದಲ್ಲಿ ಟೆಸ್ಲನ ಗೌರವಾರ್ಥ ಕಾಂತ ಅಭಿವಾಹ ಸಾಂದ್ರತೆಯ (ಮ್ಯಾಗ್ನೆಟಿಕ್ ಫ್ಲಕ್ಸ್ ಡೆನ್ಸಿಟಿ) ವ್ಯವಸ್ಥೆಯ ಏಕಮಾನವನ್ನು ಟೆಸ್ಲ ಎಂದು ನಾಮಕರಣಮಾಡಲಾಯಿತು.
(ಎ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ